Call Us Now: 08272 221717

ಮೂಡುಬಿದಿರೆಯಲ್ಲಿಂದು ಯಕ್ಷಗಾನೀಯ ಕೃಷ್ಣನ ಮೊಸರು ಕುಡಿಕೆ ಉತ್ಸವ

September 11, 2020

ಮೂಡುಬಿದಿರೆ: ಕೊರೋನಾ ಆತಂಕದ ದಿನಗಳ ತೀವ್ರತೆಯ ಏರಿಳಿತದ ನಡುವೆ ಅನ್ಲಾಕ್ ಆಗುತ್ತಿರುವ ಮೂಡುಬಿದಿರೆ ತಾಲೂಕಿನಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯ ನಂತರದ ಮೊಸರು ಕುಡಿಕೆ ಉತ್ಸವ ಸಂಭ್ರಮ ಸರಳವಾಗಿ ಜರಗಲಿದೆ. ಯಕ್ಷಗಾನೀಯ ಹಿಮ್ಮೇಳ ಸಹಿತ ವೇಷಧಾರಿ ಶ್ರೀಕೃಷ್ಣನೇ ಬೀದಿಗಳಲ್ಲಿ ಅಡ್ಡಲಾಗಿ ತೂಗು ಹಾಕಿರುವ ಮೊಸರ ಕುಡಿಕೆಗಳನ್ನು ಒಡೆಯುವ ವಿಶಿಷ್ಠ ಉತ್ಸವ ಕೊರೋನಾ ಆತಂಕದ ನಡುವೆಯೂ ಸರಳವಾಗಿ ನಡೆಯಲಿದೆ ಎನ್ನುವುದು ಜನತೆ ಒಂದಿಷ್ಟು ಸಂಭ್ರಮಕ್ಕೆ ತೆರೆದುಕೊಳ್ಳುವಂತಾಗಿದೆ.

(ಸಂಗ್ರಹ ಚಿತ್ರ)

ಪೇಟೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಮಿ, ಮೊಸರು ಕುಡಿಕೆ ಉತ್ಸವಕ್ಕೆ ಶತಮಾನದ ಇತಿಹಾಸ. ಕಟ್ಟಿದ ಮೊಸರು ಕುಡಿಕೆಗಳ ಹಗ್ಗದ ಇನ್ನೊಂದು ತುದಿಯನ್ನು ಇಳಿಸಿ,ಎಳೆದು ಶ್ರೀಕೃಷ್ಣ ವೇಷಧಾರಿಯನ್ನು ಸತಾಯಿಸಿ ಕೊನೆಗೊಮ್ಮೆ ಚಕ್ರಾಯುಧದಿಂದ ಶ್ರೀಕೃಷ್ಣನೇ ಮೊಸರು ಕುಡಿಕೆಗಳನ್ನು ಒಡೆಯುವ ಸಂಭ್ರಮ ನಾಡಿನಲ್ಲೇ ಇತರೆಡೆ ಕಾಣದ ವಿಶೇಷ. ಪೇಟೆಯ ಬೀದಿಯುದ್ದಕ್ಕೂ ನೂರಾರು ಮಡಿಕೆಗಳು ಕಟ್ಟಿ ಅವುಗಳನ್ನು ಕೃಷ್ಣ ಒಡೆಯುವ ಸಂಭ್ರಮಕ್ಕೆ ಜನಸಮೂಹವೇ ಸಾಕ್ಷಿಯಾಗುತ್ತಿದ್ದ ಸಂಭ್ರಮ ಈ ಬಾರಿ ಹೇಗಿರುತ್ತದೆ ಎನ್ನುವ ಕುತೂಹಲವಿದೆ. ಸಾಂಕೇತಿಕವಾಗಿ ಕೆಲವೆಡೆ ಒಂದಷ್ಟು ಮೊಸರು ಕುಡಿಕೆಗಳನ್ನು ನಿರೀಕ್ಷಿಸಲಾಗಿದೆ. ಆದರೆ ಪೇಟೆಯಲ್ಲಿ ಸಾಂಸ್ಕೃತಿಕ ಕಲಾಪ, ಸಭಾ ಕಾರ್ಯಕ್ರಮ ಯಾವುದೂ ಈ ಬಾರಿ ನಡೆಯುತ್ತಿಲ್ಲ. ಹಾಗಾಗಿ ಉತ್ಸವ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಮೂಡುಬಿದಿರೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸರಳವಾಗಿ ಯಶಸ್ವಿಯಾಗಿ ನಡೆದಿದ್ದು ಆ ಬಳಿಕ ಎರಡನೇ ಸಾರ್ವಜನಿಕ ಉತ್ಸವ ಇದಾಗಿದೆ. ಸಾಮಾಜಿಕ ಅಂತರದ ಕಾಯ್ದುಕೊಳ್ಳುವ ಅನಿವಾರ್ಯತೆಯೂ ಇದೆ. ಈಗಾಗಲೇ ಪೇಟೆಯಲ್ಲಿ ಸದ್ದು ಮಾಡಬೇಕಾಗಿದ್ದ ಹುಲಿಗಳು, ವೇಷಧಾರಿಗಳು, ಅಬ್ಬರ ಎಲ್ಲವೂ ಮಾಯವಾಗಿದ್ದು ಸಾಂಸ್ಕೃತಿಕ ಮೌನದಿಂದ ಹೊರಬರಲು ಮೂಡುಬಿದಿರೆ ಹವಣಿಸುತ್ತಿದೆ.