Call Us Now: 08272 221717

ಬಿರುವೆರ್ ಕುಡ್ಲ ಬೆದ್ರ ಘಟಕದಿಂದ ಹಡಿಲು ಗದ್ದೆ ಈಗ ಹಸಿರು: ಕೃಷಿಯೊಂದಿಗೆ ಸೇವೆಯ ಚಿಗುರು

September 29, 2020

ಮೂಡುಬಿದಿರೆ: ಕಳೆದ ನಾಲ್ಕು ವರ್ಷಗಳಿಂದ ಹಡಿಲು ಬಿದ್ದ ಗದ್ದೆಯಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ಕೃಷಿ ಮಾಡಿ, ಅಲ್ಲಿ ಬೆಳೆದ ಅಕ್ಕಿಯನ್ನು ಬಡವರಿಗೆ ನೀಡುವಂತಹ ಕೆಲಸವನ್ನು ಬಿರುವೆರ್ ಕುಡ್ಲದ ಬೆದ್ರ ಘಟಕವು ಮಾಡಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಬಿರುವೆರ್ ಕುಡ್ಲ ಭೂಮಿಯನ್ನು ಹಸಿರಾಗಿಸುವ ಪ್ರಯತ್ನದ ಜೊತೆಗೆ ಹಸಿವಿನಿಂದ ಕಂಗೆಟ್ಟಿರುವ ಕುಟುಂಬಗಳ ಹಸಿವು ನೀಗಿಸುವ ಚಿಂತನೆಯನ್ನು ಸೇವಾ ಯೋಜನೆ ಒಳಗೊಂಡಿದೆ.

ಬೆಳ್ತಂಗಡಿ ತಾಲೂಕಿನ ಮರೋಡಿಯ ಗ್ರಾಮದ ಹೊಸಮನೆ ಚಂದಪ್ಪ ಪೂಜಾರಿ ಅವರ ನಾಲ್ಕು ಎಕೆರೆ ಗದ್ದೆಯು ಕಳೆದ ನಾಲ್ಕು ವರ್ಷಗಳಿಂದ ಹಡಿಲು ಬಿದ್ದಿದ್ದು, ಅದಕ್ಕೆ ಕಾಯಕಲ್ಪ ನೀಡಿ, ಭತ್ತ ಬೆಳೆಸುವ ಮೂಲಕ ಗಮನಸೆಳೆದಿದೆ. ಕೃಷಿ ಕಾರ್ಮಿಕರ ಕೊರತೆಯಿಂದ ಹಡಿಲು ಬಿದ್ದ ಗದ್ದೆಯಲ್ಲಿ ಸ್ವಯಂಪ್ರೇರಿತರಾಗಿ, ಕೊರೊನ ಲಾಕ್‍ಡೌನ್ ಸಂದರ್ಭದಲ್ಲಿ ಬಿರುವೆರ್ ಕುಡ್ಲ-ಬೆದ್ರ ಘಟಕದ ಸದಸ್ಯರು ಕೃಷಿ ಕೆಲಸಕ್ಕಿಳಿದು, ಫಸಲು ಬರುವಂತೆ ಮಾಡಿದ್ದಾರೆ. 80 ಮಂದಿ ಸದಸ್ಯರು ಒಂದು ತಿಂಗಳ ಅವಧಿಯಲ್ಲಿ ಮರೋಡಿಯ ಗದ್ದೆಗೆ ಹೊಸ ರೂಪ ನೀಡಿದ್ದಾರೆ. ಬಿರುವೆರ್ ಕುಡ್ಲದ ಈ ಸೇವಾ ಕೈಂಕರ್ಯಕ್ಕೆ ಬಲಿಷ್ಠ ಬಿಲ್ಲವೆರ್ ಹಾಗೂ ಯುವ ಬಿರುವೆರ್ ಕೂಡ ಸಾಥ್ ನೀಡಿದೆ.

ಬಡವರಿಗೆ ಅಕ್ಕಿ-ಗೋಶಾಲೆಗೆ ಬೈಹುಲ್ಲು
ಸಧ್ಯ ಹಡಿಲು ಗದ್ದೆ ಬೆದ್ರ ಘಟಕದಿಂದಾಗಿ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದು ಬಿರುವೆರ್ ಕುಡ್ಲದ ಸದಸ್ಯರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಇನ್ನೆರಡು ತಿಂಗಳಲ್ಲಿ ಇಲ್ಲಿ ಬೆಳೆದ ಅಕ್ಕಿ, ಅಶಕ್ತ ಕುಟುಂಬಗಳಿಗೆ ನೀಡುವ ಕೆಲಸವನ್ನು ಘಟಕವು ಮಾಡಲಿದೆ. ಬೈಹುಲ್ಲನ್ನು ಗೋಶಾಲೆಗೆ ನೀಡುವ ಚಿಂತನೆ ಇದೆ.