Call Us Now: 08272 221717

ಹಿರಿಯ ಲೇಖಕ ಫಕ್ರುದ್ದೀನ್ ಇರುವೈಲ್ ನಿಧನ

August 2, 2020

ಮೂಡುಬಿದಿರೆ: ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕ, ಮೂಡುಬಿದಿರೆ ತಾಲೂಕಿನ ಇರುವೈಲ್ ನಿವಾಸಿ ಫಕ್ರುದೀನ್ ಇರುವೈಲ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಯಾವುದೇ ಚರ್ಚೆ, ವಾಗ್ವಾದ, ಸಾಹಿತ್ಯಿಕ ಸಂವಾದ ಇವ್ಯಾವುದರ ಗೋಜಿಗೂ ಹೋಗದೇ ತನ್ನ ಪಾಡಿಗೆ ತಾನು ಬರೆಯುತ್ತಾ ಕನ್ನಡ ಮತ್ತು ಬ್ಯಾರಿ ಕಥಾ ಜಗತ್ತನ್ನು‌‌ ಶ್ರೀಮಂತಗೊಳಿಸಿದವರು ಫಕ್ರುದ್ದೀನ್ ಇರುವೈಲ್. ವೃತ್ತಿಯಲ್ಲಿ ಚಿಕ್ಕ ಸಿವಿಲ್ ಗುತ್ತಿಗೆದಾರರಾಗಿದ್ದ ಫಕ್ರುದ್ದೀನ್ 1985ರಿಂದೀಚೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಕಟ್ಪಾಡಿ, ಬೊಳುವಾರುರ ಬಳಿಕ ಕನ್ನಡ ಕಥಾ ಜಗತ್ತಿನಲ್ಲಿ ಬ್ಯಾರಿ ಸಂವೇದನೆಯನ್ನು ದಟ್ಟವಾಗಿ ತಂದ ಕತೆಗಾರ ಫಕ್ರುದ್ದೀನ್ ಇರುವೈಲ್. ಮೂಡುಬಿದಿರೆ ತಾಲೂಕಿನ ಇರುವೈಲ್ ಎಂಬ ಪುಟ್ಟ ಗ್ರಾಮದ ಪೂವಣಿಬೆಟ್ಟು ಎಂಬ ಹಳ್ಳಿಯಲ್ಲಿ ವಾಸವಾಗಿದ್ದ ಅವರ ಮೊದಲ ಕಥಾ ಸಂಕಲನ “ಎಲ್ಲಿರುವೆ ನನ್ನ ಕಂದಾ ” 2001ರಲ್ಲಿ ನಡೆದ ಹನ್ನೆರಡನೇ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತ್ತು. ಆ ಬಳಿಕ ಅವರು ತಿರುಗಿ ನೋಡಿದ್ದೇ ಇಲ್ಲ.ಹಲೀಮಾ, ಅಲೀಮಾ ಅಕ್ಷರ ಕಲಿತದ್ದು, ಅನಿರೀಕ್ಷಿತ, ನಾದಿರಾ, ಅವಸಾನ,ನೊಂಬಲ ಹೀಗೆ ಸಾಲು ಸಾಲಾಗಿ ಪುಸ್ತಕಗಳನ್ನು ಪ್ರಕಟಿಸುತ್ತಾ ಹೋದರು. 2001ರಲ್ಲಿ ನವಕರ್ನಾಟಕ ಪ್ರಕಾಶನ ಪ್ರಕಟಿಸಿದ “ಅಲೀಮಾ ಅಕ್ಷರ ಕಲಿತದ್ದು” ಕೃತಿಗೆ ಪ್ರತಿಷ್ಠಿತ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ದೊರಕಿತ್ತು.
ಬ್ಯಾರಿ ಮುಸ್ಲಿಂ ಜಗತ್ತಿನ ಬಡತನ, ಅನಕ್ಷರತೆ, ವರದಕ್ಷಿಣೆ ಮುಂತಾದ ಸಮಸ್ಯೆಗಳನ್ನು ತನ್ನ ಕತೆಗಳಲ್ಲಿ ಸಮರ್ಥವಾಗಿ ಕಟ್ಟಿಕೊಡುತ್ತಿದ್ದ ಅವರು ತನ್ನ ಕತೆಗಳ ಮೂಲಕ ಕೋಮು ಸೌಹಾರ್ದತೆಯ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು. ಕೆಲ ಕತೆಗಳಲ್ಲಿ ತುಳುನಾಡಿನ ಸಹಬಾಳ್ವೆಯ ಚಿತ್ರಣಗಳನ್ನೂ ಅದ್ಭುತವಾಗಿ ಚಿತ್ರಿಸಿದ್ದಾರೆ. ಮೃದು ಮಾತಿನವರಾದ ಅವರು ಸಾಹಿತ್ಯವನ್ನೇ ಉಸಿರಾಡುತ್ತಾರೇನೋ ಎಂಬಷ್ಟು ಸತತವಾಗಿ ಕತೆಗಳನ್ನು ಬರೆಯುತ್ತಾ ಹೋದರು. ಅವರ ಬತ್ತಳಿಕೆಯ ತುಂಬಾ ಒಂದಕ್ಕಿಂತ ಒಂದು ವಿಭಿನ್ನವೆನ್ನುವಂತಹ ಕತೆಗಳಿದ್ದವು.