Call Us Now: 08272 221717

ಪೆರಿಂಜೆ ಪೇರಿ-ಹೊಸಂಗಡಿ ಕಿಂಡಿ ಅಣೆಕಟ್ಟು: ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ವಸಂತ ಬಂಗೇರ ವೀಕ್ಷಣೆ

October 15, 2020

ಮೂಡುಬಿದಿರೆ: ಅಂತರ್ಜಲ ವೃದ್ಧಿ ಹಾಗೂ ಕೃಷಿಗೆ ಅನುಕೂಲವಾಗುವಂತೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪೆರಿಂಜೆಯ ಪೇರಿ ಮತ್ತು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾರೂರು ನೆತ್ತೋಡಿ ನಡುವೆ ಹರಿಯುವ ಹೊಸಂಗಡಿ ಹೊಳೆಯ ಫಲ್ಗುಣಿ ನದಿ ದಡಗಳನ್ನು ರಸ್ತೆ ಸಹಿತ ಬೆಸೆಯುವ ರೂ. 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟನ್ನು ಮಾಜಿ ಸಚಿವ ಕೆ. ಅಭಯಚಂದ್ರ ಮತ್ತು ಮಾಜಿ ಶಾಸಕ ವಸಂತ ಬಂಗೇರ ವೀಕ್ಷಿಸಿದರು.

ನಂತರ ಮಾತನಾಡಿದ ಮಾಜಿ ಸಚಿವ ಕೆ. ಅಭಯಚಂದ್ರ ಅವರು `ಪಶ್ಚಿಮ ವಾಹಿನಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲೇ ಮೊತ್ತ ಮೊದಲಾಗಿ ನಡೆದಿರುವ ಈ ಕಾಮಗಾರಿಯಾಗಿದ್ದು ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅತಿ ಶೀಘ್ರದಲ್ಲಿ ಈ ಕಾಮಗಾರಿ ನಡೆದಿದೆ. ಎರಡೂ ದಂಡೆಗಳ ಸುಮಾರು ಐದು ಕಿ.ಮೀ. ವ್ಯಾಪ್ತಿಯಲ್ಲಿ ನೀರು ಶೇಖರಣೆಯಾಗುವುದರಿಂದ ಅಂತರ್ಜಲ ವೃದ್ಧಿಯಾಗಿ ರೈತರು, ಕೃಷಿಕರೇ ತುಂಬಿರುವ ಈ ಭಾಗದ ಎಲ್ಲರಿಗೂ ಬಹಳ ಅನುಕೂಲವಾಗಲಿದೆ. ಕೃಷಿಕಾರ್ಯ ಹೆಚ್ಚಿನ ಹುಮ್ಮಸ್ಸಿನಿಂದ ನಡೆಯಲಿದೆ. ಕಿಂಡಿ ಅಣೆಕಟ್ಟಿನೊಂದಿಗೆ ಸೇತುವೆಯಂತೆ ಒಂದು ವಾಹನ ಓಡಾಡಬಲ್ಲ ಕಾಂಕ್ರೀಟ್ ರಸ್ತೆಯೂ ನಿರ್ಮಾಣವಾಗಿರುವುದರಿಂದ ಹೊಳೆಯ ಎರಡೂ ಕಡೆಯ ಜನರಿಗೆ ಬಹಳ ಅನುಕೂಲವಾಗಲಿದೆ. ಇದಲ್ಲದೆ, ಮೂಡುಬಿದಿರೆಗೆ ಮುಂದಿನ 25 ವರ್ಷಗಳ ಕಾಲ ಜಲಧಾರೆ ಇಲ್ಲಿಂದ ಹರಿದು ಬರಲಿದೆ; ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೂ ನೀರೊದಗಿಸಲು ಈ ಅಣೆಕಟ್ಟಿನಿಂದ ಸಾಧ್ಯವಿದೆ .ಕಿಂಡಿ ಅಣೆಕಟ್ಟು ಎರಡೂ ಕಡೆಯ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಈಗಿನ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ‘ ಎಂದು ಅಭಯಚಂದ್ರ ವಿನಂತಿಸಿದರು.
ಜಿ.ಪಂ. ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ತಾ.ಪಂ. ಸದಸ್ಯ ಓಬಯ್ಯ, ಮೂಡುಬಿದಿರೆ ಪುರಸಭೆಯ ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಸದಸ್ಯ ಸುರೇಶ್ ಕೋಟ್ಯಾನ್, ಹೊಸಂಗಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಹೇಮಾ ವಸಂತ್, ಮಾಜಿ ಸದಸ್ಯರಾದ ಶ್ರೀಪತಿ ಉಪಾಧ್ಯಾಯ, ಹರಿಪ್ರಸಾದ್, ಸುಮತಿ ಪರಿಸರದ ಹಿರಿಯರಾದ ಪದ್ಮರಾಜ ಪೇರಿ, ರೈತ ಸಂಘಟನೆಯ ಅಲ್ವಿನ್ ಮಿನೇಜಸ್ ಮೊದಲಾದವರಿದ್ದರು.
ಪೆರಿಂಜೆಯ ಪೇರಿ ಮತ್ತು ಮೂಡುಬಿದಿರೆ ಕ್ಷೇತ್ರದ ಮಾರೂರು ನೆತ್ತೋಡಿಯನ್ನು ಬೆಸೆಯುವ, ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣವಾಗಿರುವ ರೂ. 7 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟನ್ನು ಮಾಜಿ ಸಚಿವ ಕೆ. ಅಭಯಚಂದ್ರ ಮತ್ತು ಮಾಜಿ ಶಾಸಕ ವಸಂತ ಬಂಗೇರ ವೀಕ್ಷಿಸಿದರು.