Call Us Now: 08272 221717

ಕಾಂತಾವರದ ಕನ್ನಡ ಸಂಘಕ್ಕೂ ಕೊರೋನಾ ಕರಿನೆರಳು?

June 13,2020

ಕಾರ್ಳ: ಕಳೆದ ಐದೂವರೆ ದಶಕಗಳ ಕಾಲ ಕನ್ನಡ ನಾಡು, ನುಡಿ ಸೇವೆಗೆ ಮಾದರಿಯಾಗಿ ಕನ್ನಡ ಸಾಹಿತಿಗಳು, ಸಾಹಿತ್ಯಾಸಕ್ತರ ಪಾಲಿಗೆ ಅಯಸ್ಕಾಂತಾವರವಾಗಿದ್ದ ಕಾಂತಾವರದ ಕನ್ನಡ ಸಂಘಕ್ಕೂ ಕೊರೋನಾ ಕಂಟಕದ ಕರಿನೆರಳು ಆವರಿಸುತ್ತಿದೆಯೇ ಎನ್ನುವ ಅನುಮಾನವೀಗ ಹುಟ್ಟಿಕೊಂಡಿದೆ. ಆ ಮೂಲಕ ಕನ್ನಡ ಕಾವ್ಯ ಲೋಕದ ಮೊದಲ ಪ್ರತಿಷ್ಠಿತ ಖಾಸಗಿ ಪ್ರಶಸ್ತಿಯಾಗಿದ್ದ ಮುದ್ದಣ ಕಾವ್ಯ ಪ್ರಶಸ್ತಿ, ಕನ್ನಡ ಸಂಘದ ಐದಾರು ಪ್ರಾಯೋಜಿತ ಪ್ರಶಸ್ತಿಗಳ ಪ್ರದಾನ ಮುಂದಿನ ದಿನಗಳಲ್ಲಿ ಕಷ್ಟ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಹಾಗಾಗಿ ಕನ್ನಡ ನುಡಿ ತೇರಿನ ನಿತ್ಯೋತ್ಸವದ ಅಂಗಳವಾಗಿದ್ದ ಕಾಂತಾವರದ ಕನ್ನಡ ಭವನದ ಸಾಹಿತ್ಯ ಚಟುವಟಿಕೆಗಳು, ತಿಂಗಳ ನುಡಿನಮನ, ಕೃತಿ ಪ್ರಕಟಣೆ, ನಾಡಿಗೇ ಮಾದರಿಯಾಗಿ ಮುನ್ನೂರರ ಗಡಿ ತಲುಪಿದ್ದ ನಾಡಿಗೆ ನಮಸ್ಕಾರ ಗ್ರಂಥ ಮಾಲೆ, ಅಲ್ಲಮ ಪ್ರಭು ಪೀಠ ಹೀಗೆ ಕನ್ನಡದ ಹಳ್ಳಿಯ ಈ ಅಮೂಲ್ಯ ಸಾಹಿತ್ಯ ಸೇವೆ ಕೊರೋನಾ ಸಂಕಟದ ಕಾರಣಕ್ಕೆ ಕೊನೆಗೊಳ್ಳಲಿವೆಯೇ? ಎನ್ನುವ ಆತಂಕದ ಪ್ರಶ್ನೆಗೆ ಹಾಗಾದರೂ ಅಚ್ಚರಿಯೇನಿಲ್ಲ ಎನ್ನುತ್ತಾರೆ ಕಾಂತಾವರವನ್ನು ಕೇಂದ್ರವಾಗಿಟ್ಟುಕೊಂಡು ನಾಡಿನ ಉದ್ದಗಲ ಕನ್ನಡದ ಸಾಹಿತ್ಯ ಸೇವೆಯ ಸಾರಥಿಯಾದ ಹಿರಿಯ ಸಾಹಿತ್ಯ ವೈದ್ಯ ಡಾ. ನಾ. ಮೊಗಸಾಲೆ.

ಕೊರೋನಾ ಸಂಕಟದ ಕಾರಣಕ್ಕೆ ಲಾಕ್‌ಡೌನ್ ಶುರುವಾದಂದಿನಿಂದ ಇತರ ಕಡೆಗಳಂತೆ ಕಾಂತಾವರದಲ್ಲೂ ಸಾಹಿತ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಎಪ್ಪತ್ತೊಂದರ ಇಳಿ ವಯಸ್ಸಿನಲ್ಲೂ ಇಪ್ಪತ್ತರ ಉತ್ಸಾಹದೊಂದಿಗೆ ಸದಾ ಕನ್ನಡ ಸಾಹಿತ್ಯ ಸೇವೆಯಲ್ಲಿ ಹೊಸತನದೊಂದಿಗೆ ಬಿಡುವಿಲ್ಲದವರಂತೆ ಸಕ್ರಿಯವಾಗಿರುತ್ತಿದ್ದ ಡಾ, ಮೊಗಸಾಲೆ ಕನ್ನಡ ಸಂಘದ ಸೇವೆಯ ಕುರಿತಾದ ತಮ್ಮ ಆತಂಕವನ್ನು ಹಂಚಿಕೊಂಡರು.
ಕೊರೋನಾ ಲಾಕ್‌ಡೌನ್ ಬಳಿಕ ಸಾಹಿತ್ಯ ಚಟುವಟಿಕೆಗಳು ಇಲ್ಲಿ ನಿಂತು ಹೋಗಿವೆ. ಸಭೆ, ಸಮಾರಂಭ ಮಾಡುವ ಹಾಗಿಲ್ಲ. ಕನ್ನಡ ಸಂಘವನ್ನು ಈವರೆಗೂ ಕೈ ಹಿಡಿದು ನಡೆಸಿದ ದಾನಿಗಳ ಸಹಕಾರವಂತೂ ಬಹಳ ದೊಡ್ಡದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರೆಲ್ಲರ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲ. ಈ ಸಮಯದಲ್ಲಿ ಮುದ್ದಣ ಕಾವ್ಯ, ಇನ್ನಿತರ ಪ್ರತಿಷ್ಠಿತ ಪ್ರಶಸ್ತಿಗಳ ನಗದು ಪುರಸ್ಕಾರಗಳಿಗೆ ಅವರನ್ನು ಕೇಳುವುದಾರರೂ ಹೇಗೆ? ಸಭೆ ಸಮಾರಂಭಗಳಿಗಳಿಗಂತೂ ಸಾವಿರಾರು ರೂಪಾಯಿ ಹೊಂದಿಸಿಕೊಳ್ಳಬೇಕು. ಅವೆಲ್ಲವೂ ನಮ್ಮ ಮೇಲಿನ ಪ್ರೀತಿಯಿಂದ ಪ್ರಾಯೋಜಕರೇ ಕೇಳಿದಾಗಲೆಲ್ಲ ಕೊಟ್ಟಿದ್ದರು. ಆದರೆ ಈಗ ಆ ಉತ್ಸಾಹ, ವಾತಾವರಣ ನನ್ನಲ್ಲೂ ಇಲ್ಲ ಅವರಲ್ಲೂ ಇರಲಿಕ್ಕಿಲ್ಲ ಎನ್ನುವಾಗ ನಿರಾಶೆ ಅವರಲ್ಲಿ ಎದ್ದು ಕಾಣುತ್ತದೆ.

ಕನ್ನಡ ಸಂಘ ಆರ್ಥಿಕವಾಗಿ ಹೇಳಿಕೊಳ್ಳುವಷ್ಟು ಸುದೃಡವಾಗಿಲ್ಲ. ಆದರೆ ಹೃದಯ ಶ್ರೀಮಂತಿಕೆಯ ಸಮಾನ ಮನಸ್ಕರು ದಾನಿಗಳಾಗಿ ಈವರೆಗೂ , ಮುದ್ದಣಕಾವ್ಯ ಪ್ರಶಸ್ತಿ, ಕಾಂತಾವರದ ಕನ್ನಡ ಚಟುವಟಿಕೆಗಳು, ಅಲ್ಲಮ ಪ್ರಭು ಪೀಠ, ಸಂಸ್ಕೃತಿ ಗ್ರಾಮ, ಅಲ್ಲಮನ ಹಳ್ಳಿ, ನಾಡಿಗೆ ನಮಸ್ಕಾರ ಗ್ರಂಥಮಾಲೆ ಇವೆಲ್ಲವೂ ನಿರಂತರವಾಗಿ ನಡೆಯುತ್ತಿದೆ. ನಾನೇನಿದ್ದರೂ ನೆಪ ಮಾತ್ರ ಎನ್ನುವ ಡಾ. ನಾ. ಮೊಗಸಾಲೆಯವರಿಗೆ ಕನ್ನಡದ ಕೆಲಸ ಕಾಂತಾವರದ ಮೂಲಕ ನಿರಂತರ ನಡೆಯುತ್ತಿರಬೇಕು ಎಂದಿನ ಕನಸು ನನಸಾಗುತ್ತದೊ ಇಲ್ಲವೊ ಎಂಬ ಆತಂಕವೀಗ ಕಾಡಲಾರಂಭಿಸಿದೆ. ಬದಲಾದ ಪರಿಸ್ಥಿತಿಯಲ್ಲಿ ಆನ್‌ಲೈನ್ ಕಾರ್ಯಕ್ರಮಗಳನ್ನೂ ಸರಳವಾಗಿ ನಡೆಸಿ ಕೃತಿ ಪ್ರಕಟಣೆಯ ಕಾರ್ಯವನ್ನೂ ಸಾಧ್ಯವಿದ್ದಷ್ಟು ಮುಂದುವರೆಸಬೇಕು ಎನ್ನುವ ಆತ್ಮವಿಶ್ವಾಸವೂ ಅವರಲ್ಲಿದೆ.

ಲಾಕ್‌ಡೌನ್ ಸಂಕಷ್ಟದ ಒಂಟಿತನದ ಪರಿಸ್ಥಿತಿಯಲ್ಲೂ ಮೊಗಸಾಲೆಯವರು ಸುಮ್ಮನಿದ್ದಿಲ್ಲ. ಓರ್ವ ಸಾಹಿತಿಯಾಗಿ, ಕಾದಂಬರಿಕಾರರಾಗಿ ಕನ್ನಡ ಸಂಘದ ಆಗು ಹೋಗುಗಳ ಅವಲೋಕನ, ಭವಿಷ್ಯದ ಚಿಂತನೆಗಳ ನಡುವೆ ಧರ್ಮಯುದ್ಧ ಎನ್ನುವ ಕಾದಂಬರಿಯೊAದನ್ನು ಬರೆದು ಮುಗಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ‘ಇದ್ದು ಇಲ್ಲದ್ದು ಇಲ್ಲದ್ದೂ ಇದ್ದು’ ಎನ್ನುವ ಇನ್ನೊಂದು ಕಾದಂಬರಿಯನ್ನೂ ಬರೆಯುತ್ತಿದ್ದಾರೆ. ಸಾಹಿತ್ಯೋತ್ಸಾಹ ಅವರಲ್ಲಿನ್ನೂ ಬತ್ತಿಲ್ಲ. ಆದರೆ ಈಗಿನ ಪರಿಸ್ಥಿತಿಯ ವಾತಾವರಣದಲ್ಲಿ ಸಾಹಿತ್ಯ ಸೇವೆ, ಸಂಘಟನೆಗಳ ಜವಾಬ್ದಾರಿ ಕಷ್ಟ ಸಾಧ್ಯ ಎನ್ನುವ ಆತಂಕ ಅವರಲ್ಲಿ ಬಲವಾಗಿದೆ.

ಕಾಂತಾವರದ ಕನ್ನಡದ ಮೊಗಸಾಲೆಯೆಂದರೆ..!
ಕನ್ನಡ ನಾಡು ನುಡಿ ಸೇವೆಯಲ್ಲಿ ಕಾಂತಾವರ ಕನ್ನಡ ಸಂಘ ನಾಡಿಗೇ ಮಾದರಿ. ಕುಗ್ರಾಮವಾಗಿದ್ದ ಹಳ್ಳಿ ಕಾಂತಾವರ ಅಯಸ್ಕಾಂತಾವರವಾಗಿ ಸಾಹಿತಿ, ಸಾಹಿತ್ಯಾಸಕ್ತರೆಲ್ಲರನ್ನೂ ಆಕರ್ಷಿಸಿ ಕಳೆದ ಐದೂವರೆ ದಶಕಗಳಲ್ಲಿ ಮಾಡಿದ ಸಾಧನೆ, ಸಾಹಿತ್ಯ ಸೇವೆ ಬೆಲೆಕಟ್ಟಲಾಗದ್ದು. ದಕ್ಷಿಣ ಕನ್ನಡದ ಕಾವ್ಯ, ದಕ್ಷಿಣ ಕನ್ನಡದ ಶತಮಾನದ ಕಾವ್ಯಗಳ ಕುರಿತಾದ ಆಂತಾಲಜಿ ಪ್ರಕಟಿಸಿದ ಸಾಹಸ, ಏಕೀಕರಣ ಚಳುವಳಿಯ ನೇತಾರ ಕೆ. ಬಿ.ಜಿನರಾಜ ಹೆಗ್ಡೆಯವರ ಶತಮಾನೋತ್ಸವ ಸಂಸ್ಮರಣೆಗೆ ಕನ್ನಡ ಭವನ, ಮುದ್ದಣ ಕಾವ್ಯ ಹೀಗೆ ಖಾಸಗಿಯಾಗಿ ನಾಡಿಗೆ ಮೊದಲ ಪ್ರತಿಷ್ಠಿತ ಪ್ರಶಸ್ತಿಗಳನ್ನು ಆರಂಭಿಸಿ ಬೆಳೆಸಿದ್ದು, ಪ್ರತೀ ತಿಂಗಳೂ ಸಾಹಿತ್ಯ ಸಂವಾದ, ಉಪನ್ಯಾಸ, ಕೃತಿ ಪ್ರಕಟಣೆ, ದ.ಕ ಜಿಲ್ಲೆಯ ಸಾಧಕರನ್ನು ನಾಡಿಗೇ ಪರಿಚಯಿಸುವ ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಮುನ್ನೂರರಷ್ಟು ಕೃತಿಗಳ ಪ್ರಕಟಣೆ ವಿವಿ ಮಟ್ಟದಲ್ಲಿಯೂ ನಡೆಯದ ಸಾಧನೆ. ಸರಕಾರವೇ ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಮಾದರಿ ಸಾಹಿತ್ಯ ಸೇವೆ ನಡೆಸಿಕೊಂಡು ಬಂದಿರುವ ಕಾಂತಾವರ ಕನ್ನಡ ಸಂಘಕ್ಕೆ ಶಿವರಾಮ ಕಾರಂತರ ಬಳಿಕ ಕರಾವಳಿಯ ಸಾಹಿತ್ಯ ಭಾರ್ಗವನಂತೆ ಡಾ. ನಾ ಮೊಗಸಾಲೆ ಎಪ್ಪತ್ತೊಂದರ ಈ ವಯಸ್ಸಿನಲ್ಲೂ ಯುವಕರೂ ನಾಚುವಂತೆ
ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಕಾಂತಾವರ ಕನ್ನಡ ಸಂಘದ ಚಟುವಟಿಕೆ ಸ್ಥಗಿತಗೊಳ್ಳುವುದು ಎಂದರೆ ಅದು ಕನ್ನಡ ಸಾಹಿತ್ಯಾಭಿಮಾನಿಗಳಲ್ಲದೇ ಕನ್ನಡಿಗರ ಸ್ವಾಭಿಮಾನವೂ ಸೋತಂತಾಗುತ್ತದೆ. ಇದು ಬರೇ ಸರಕಾರ, ಸಂಸ್ಕೃತಿ ಇಲಾಖೆ ಮಾತ್ರವಲ್ಲ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಿಗರೆಲ್ಲರೂ ಕಾಳಜಿಯಿಂದ ಸ್ಪಂದಿಸಬೇಕಾದ ವಿಚಾರ.