Call Us Now: 08272 221717

ಸಾಹಿತ್ಯದ ಬಯಲ ಬೆಟ್ಟ ಡಾ. ನಾ. ಮೊಗಸಾಲೆ ಕೃತಿ ಲೋಕಾರ್ಪಣೆ

June 22, 2020

ಕಾರ್ಕಳ : ಕಾಂತಾವರ ಕನ್ನಡ ಸಂಘದ ಮೂಲಕ ನಾಡಿಗೆ ನಮಸ್ಕಾರ ಎಂದು ಈಗಾಗಲೇ 299 ಸರಣಿ ಪುಸ್ತಕಗಳನ್ನು ಪ್ರಕಟಿಸಿ ನಾಡಿಗೆ ಸಮರ್ಪಿಸಿರುವ ಡಾ. ನಾ. ಮೊಗಸಾಲೆಯವರು ಕನ್ನಡ ಸ್ವಾರಸ್ವತ ಲೋಕದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಸಾಧಕ, ಸಂಘಟಕ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡ ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ, ಹಿರಿಯ ಸಾಹಿತಿ, ಸಂಘಟಕ ಡಾ. ನಾ. ಮೊಗಸಾಲೆಯವರ ವ್ಯಕ್ತಿತ್ವ-ಸಾಧನೆಗಳ ಪರಿಚಯ ಕುರಿತಾಗಿ ವಿಮರ್ಶಕ, ಲೇಖಕ ಡಾ. ಬಿ. ಜನಾರ್ದನ ಭಟ್ ಬರೆದಿರುವ ‘ಸಾಹಿತ್ಯದ ಬಯಲ ಬೆಟ್ಟ ಡಾ. ನಾ. ಮೊಗಸಾಲೆ’ ಕೃತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮೊಗಸಾಲೆಯವರ ಪರಿಚಯ ಕೃತಿಯನ್ನು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವುದು ಸಂತಸದ ವಿಚಾರ. ಈ ಮೂಲಕ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಡಾ. ನಾ. ಮೊಗಸಾಲೆಯವರಿಗೆ ವಿಶೇಷ ಗೌರವವನ್ನು ಸಲ್ಲಿಸುವುದರ ಮೂಲಕ ವಿಶಿಷ್ಟ ಕಾರ್ಯವನ್ನು ಮಾಡಿ ಹೆಗ್ಗಳಿಕೆಗೆ ಪಾತ್ರವಾಗಿದೆ.ಮೊಗಸಾಲೆಯವರ ಸಾಹಿತ್ಯ ಸೇವೆ ಮುಂದೆಯೂ ನಿರಂತರವಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಶ್ರೀಮತಿ ಹೇಮಾವತಿ ವೀ ಹೆಗ್ಗಡೆಯವರು ಡಾ. ನಾ. ಮೊಗಸಾಲೆ ದಂಪತಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ಯಶೋವರ್ಮ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಲೇಖಕರಾದ ಡಾ. ಬಿ. ಜನಾರ್ದನ ಭಟ್, ಪ್ರೇಮಾ ಮೊಗಸಾಲೆ, ಸುಧಾ ಜೆ. ಭಟ್, ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ. ಪಿ. ಸಂಪತ್ ಕುಮಾರ್, ಡಾ. ವಿಘ್ನರಾಜ್ ಧರ್ಮಸ್ಥಳ ಮತ್ತು ಕಾರ್ಯಕ್ರಮದ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು.