Call Us Now: 08272 221717

ವಿದ್ಯಾಗಮನದಿಂದಾಗಿ ಶಿಕ್ಷಕ ದಂಪತಿಗೆ ಕೊರೊನಾ ಪಾಸಿಟಿವ್: ಸರ್ಕಾರದ ನೆರವಿಗೆ ಮಗಳಿಂದ ಮನವಿ

October 14, 2020

ಮೂಡುಬಿದಿರೆ: ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿದ್ದ ತಂದೆ-ತಾಯಿ ಇಬ್ಬರೂ ಕೊರೊನಾ ಪಾಸಿಟಿವ್. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಆರೋಗ್ಯವಾಗಿದ್ದ ತಂದೆ-ತಾಯಿ, ವಿದ್ಯಾಗಮನ ಯೋಜನೆಯಿಂದ ಊರು ಸುತ್ತಾಡಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ತಾಯಿ ತೀವ್ರ ರೀತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು, ತಂದೆ-ತಾಯಿಯ ಆರೋಗ್ಯದ ಖರ್ಚು ಭರಿಸಲು ಪದವಿ ವಿದ್ಯಾರ್ಥಿನಿಯಯಾಗಿರುವ ಮಗಳು ಪರದಾಡುವ ಸ್ಥಿತಿ.

ಮೂಡುಬಿದಿರೆಯ ಐಶ್ವರ್ಯ ಜೈನ್ ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ. ತಂದೆ ಶಶಿಕಾಂತ್ ವೈ ಸ್ಥಳೀಯ ಡಿಜೆ ಅನುದಾನಿತ ಶಾಲಾ ಮುಖ್ಯ ಶಿಕ್ಷಕ. ತಾಯಿ ಪದ್ಮಾಕ್ಷಿ ಎನ್, ಮಕ್ಕಿಯ ಜವಾಹರಲಾಲ ನೆಹರೂ ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ. ವಿದ್ಯಾಗಮನ ಡ್ಯೂಟಿಗೆ ಹಾಜರಾಗಿದ್ದ ಇಬ್ಬರೂ ಕೊರೋನಾ ಪಾಸಿಟಿವ್‍ಗೆ ತುತ್ತಾಗಿದ್ದಾರೆ. ಈ ಪೈಕಿ ಶಶಿಕಾಂತ್ ಸುಧಾರಿಸಿಕೊಳ್ಳುತ್ತಿದ್ದು ಪದ್ಮಾಕ್ಷಿ ಕಳೆದ ಸೆ.29ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಪ್ರಾಣ ಸಂಕಟದಲ್ಲಿದ್ದಾರೆ. ದಿನವೊಂದಕ್ಕೆ ಸರಾಸರಿ 30 ಸಾವಿರದಷ್ಟು ಆಸ್ಪತ್ರೆ ವೆಚ್ಚ, ಆತಂಕ ಈಗಾಗಲೇ 6ರಿಂದ 7ಲಕ್ಷ ರೂ ಖರ್ಚಾಗಿದ್ದು ಇದೀಗ ಈ ಕುಟುಂಬ ಕಂಗಾಲಾಗಿದೆ.
`ನನ್ನ ಹೆತ್ತವರು ಕ್ಷೇಮವಾಗಿದ್ದರು. ವಿದ್ಯಾಗಮನದಿಂದಾಗಿ ಈಗ ನನ್ನ ಅಮ್ಮನ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ. ನನ್ನ ಅಮ್ಮನಿಗೇನಾದರೂ ಆದರೆ ಅದಕ್ಕೆ ಸರಕಾರವೇ ಹೊಣೆ’ ಇದು ಹೆತ್ತತಾಯಿಯ ಪರಿಸ್ಥಿತಿ ನೋಡಲಾಗದ ಪುತ್ರಿಯೋರ್ವಳ ಆಕ್ರೋಶದ ಅಳಲು.
ಆರ್ಥಿಕವಾಗಿಯೂ ಸಂಕಷ್ಟ ಎದುರಾಗಿದ್ದು ಸಹಾಯಕ್ಕಾಗಿ ಐಶ್ವರ್ಯ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸೇರಿದಂತೆ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಶಾಸಕ, ಸಂಸದರ ಜತೆಗೆ ವಿವಿಧ ಇಲಾಖೆಯವರಿಗೂ ಮನವಿ ಮಾಡಿದ್ದಾರೆ. ಈ ಮನವಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಐಶ್ವರ್ಯ ಅವರಿಗೆ ಸ್ಥಳೀಯರಿಂದ ಧೈರ್ಯ ತುಂಬುವ ಭರವಸೆಯ ಕರೆಗಳು ಬರಲಾರಂಭಿಸಿವೆ.