Call Us Now: 08272 221717

ಸರ್ಕಾರದ ಗಮನಸೆಳೆದಿದ್ದ ಮೂಡುಬಿದಿರೆ ಶಿರ್ತಾಡಿಯ ಶಿಕ್ಷಕಿ ನಿಧನ

October 16, 2020

ಮೂಡುಬಿದಿರೆ: ಕಳೆದ ಮೂರು ದಿನಗಳಿಂದ ರಾಜ್ಯಮಟ್ಟದಲ್ಲಿ ಗಮನಸೆಳೆದಿದ್ದ ಮೂಡುಬಿದಿರೆ ತಾಲೂಕಿನ ಅನುದಾನಿತ ಶಾಲಾ ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಿದ್ಯಾಗಮ ಯೋಜನೆಯಡಿ ಇವರು ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ ಹೇಳಿಕೊಡುತ್ತಿದ್ದು, ಈ ವೇಳೆ ಕೊರೊನಾ ತಗಲಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಸಲಾಗಿತ್ತು. ಅವರ ಪತಿ ಶಶಿಕಾಂತ್ ವೈ ಮತ್ತು ಪುತ್ರನಿಗೂ ಕೊರೊನಾ ಸೋಂಕಿದ್ದರೂ, ಅವರಿಗೆ ಬಳಿಕ ನೆಗಟಿವ್ ವರದಿಯಾಗಿತ್ತು. ಶಿಕ್ಷಕಿ ಪದ್ಮಾಕ್ಷಿಯವರು ನೆಗೆಟಿವ್ ಬಂದಿದ್ದರೂ ಶ್ವಾಸಕೋಶದ ತೊಂದರೆಯಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು. ತಮ್ಮ ಕುಟುಂಬ ಎದುರಿಸುತ್ತಿರುವ ಸಂಕಷ್ಟದ ಕುರಿತು ದಂಪತಿಯ ಪುತ್ರಿ ಐಶ್ವರ್ಯ ಜೈನ್ ಫೇಸ್‍ಬುಕ್‍ನಲ್ಲಿ ಅಳಲು ತೋಡಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿ ಮಾಧ್ಯಮಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಚಿಕಿತ್ಸೆಯ ಎಲ್ಲ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು, ಅಧಿಕಾರಿಗಳಿಗೂ ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಈ ಮಧ್ಯೆ ಗುರುವಾರ ಶಿಕ್ಷಕಿಯ ಆರೋಗ್ಯ ಮತ್ತಷ್ಟು ಬಿಗಾಡಯಿಸಿದ್ದು, ಶುಕ್ರವಾರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರದ ವತಿಯಿಂದಲೇ ಏರ್‍ಲಿಫ್ಟ್ ಮಾಡಿ ಬೆಂಗಳೂರಿಗೆ ಕರೆದೊಯ್ದು ಉನ್ನತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ನಿಧನರಾದರು.