Call Us Now: 08272 221717

ರೈತ,ಕಾರ್ಮಿಕ ಸುಗ್ರೀವಾಜ್ಞೆಗಳನ್ನು ವಿರೋಧಿಸಿ ಮೂಡುಬಿದಿರೆಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

September 25, 2020

ಮೂಡುಬಿದಿರೆ: ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ಸುಗ್ರೀವಾಜ್ಞೆಗಳನ್ನು ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮತ್ತು ದ.ಕ ಜಿಲ್ಲಾ ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಮೂಡುಬಿದಿರೆ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ಕೆ.ರಮಾನಾಥ ರೈ ಮಾತನಾಡಿ, ಉಳುವವನೇ ಭೂಮಿ ಒಡೆಯ, ಅಕ್ರಮ ಸಕ್ರಮ ವ್ಯವಸ್ಥೆ ಹಿಂದೆ ಬಡವರು, ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿತ್ತು. ಆದರೆ ಇಂದು ಸರ್ಕಾರದ ಜನವಿರೋದಿಯಾಗಿ, ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ರೈತರ ಭೂಮಿ ಬಂಡವಾಳಶಾಹಿ ಕೈ ಸೇರುವ ಭಯದ ವಾತಾವರಣ ಉಂಟಾಗಿದೆ. ಕೇಂದ್ರ ಸರ್ಕಾರ ಮೂರು ಲಕ್ಷ ಕೋಟಿ ರೂಪಾಯಿ ಬಂಡವಾಳಶಾಹಿಗಳ ಸಾಲ ಮನ್ನವಾಗಿದೆಯೇ ಹೊರತು, ರೈತರ ಸಾಲ ಮನ್ನಾವಾಗಿಲ್ಲ. ಕೇಂದ್ರ ಸರ್ಕಾರ ಈಗಿನ ನೀತಿ ಏನು ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ರೈತರ, ಕಾರ್ಮಿಕರ, ಬಡವರ ಉದ್ಧಾರ ಮಾಡುವ ಬದಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ, ಕಾರ್ಪೋರೇಟ್ ಕಂಪೆನಿಗಳ ಹಿತಕ್ಕಾಗಿ ಕಾನೂನು ರೂಪಿಸುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯಾದವ ಶೆಟ್ಟಿ, ರೈತರ, ಕಾರ್ಮಿಕ ಮೇಲೆ ಸರ್ಕಾರದ ತಿದ್ದುಪಡಿಗಳ ಪರಿಣಾಮದ ಕುರಿತು ಮಾತನಾಡಿದರು,
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ರೈತ ಸಂಘ ಮತ್ತು ಹಸಿರುಸೇನೆಯ ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, ಮೂಡುಬಿದಿರೆ ವಲಯ ಅಧ್ಯಕ್ಷ ಲಿಯೋ ನಝರತ್, ಕಿಸಾನ್ ಕಾಂಗ್ರೆs ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಸಮೃದ್ಧಿ ಕೃಷಿಕರ ಸಂಘಟನೆಯ ಅಧ್ಯಕ್ಷ ರೋಶನ್ ಫೆರ್ನಾಂಡಿಸ್, ಮುಖಂಡರಾದ ಸುರೇಶ್ ಪ್ರಭು, ರಮಣಿ, ಸುಪ್ರಿಯಾ ಡಿ.ಶೆಟ್ಟಿ, ಚಂದ್ರಹಾಸ ಸನಿಲ್, ಸುರೇಶ್ ಕೋಟ್ಯಾನ್, ವಲೇರಿಯನ್ ಸಿಕ್ವೇರ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ, ಸಿಐಟಿಯು ಮೂಡುಬಿದಿರೆ ತಾಲೂಕು ಸಮಿತಿ, ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್‍ವಾದ), ದಲಿತ ಸಂಘರ್ಷ ಸಮಿತಿ( ಭೀಮ ಘರ್ಜನೆ), ದಲಿತ ಹಕ್ಕುಗಳ ಸಮಿತಿ ಮೂಡುಬಿದಿರೆ, ಕಿಸಾನ್ ಕಾಂಗ್ರೆಸ್ ಮೂಡುಬಿದಿರೆ, ಸಮೃದ್ಧಿ ಮೂಡುಬಿದಿರೆ ರೈತ ಕೃಷಿಕರ ಸಂಘಟನೆಯ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.