Call Us Now: 08272 221717

ಮೂಡುಬಿದಿರೆ ತಾಲೂಕು ಮಟ್ಟದ ಪೋಷಣ್ ಅಭಿಯಾನ್ ಮಾಸಾಚರಣೆಗೆ ಚಾಲನೆ

September 11, 2020

ಮೂಡುಬಿದಿರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಫೋಷಣ್ ಅಭಿಯಾನ್ ಮಾಸಾಚರಣೆಯ ತಾಲೂಕು ಮಟ್ಟದ ಉದ್ಘಾಟನಾ ಸಮಾರಂಭವು ನಾಗರಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ನಡೆಯಿತು.

ೂಡುಬಿದಿರೆ ತಾಲೂಕು ಪಂಚಾಯತ್ ಅಧ್ಯಕ್ಷೆ ರೇಖಾ ಸಾಲ್ಯಾನ್ ಅಭಿಯಾನಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಫೋಷಣ್ ಅಭಿಯಾನ್ ಮಾಸಾಚರಣೆಯ ಮೂಲಕ ಪೌಷ್ಠಿಕತೆಯ ಬಗೆಗಿನ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವಂತಹ ಕೆಲಸಗಳಾಗಲಿ ಎಂದರು.
ತಾ.ಪಂ ಉಪಾಧ್ಯಕ್ಷ ಸಂತೋಷ್ ಮತ್ತು ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಪೋಷಣ್ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿದರು. ಅಭಿಯಾನದ ಜಿಲ್ಲಾ ನಿರೂಪಣಾಧಿಕಾರಿ ಶ್ಯಾಮಲಾ ಸಿ.ಕೆ ಪೋಷಣ್ ಅಭಿಯಾನ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾ ಒಂದು ಮಗುವಿನ ಸಂಪೂರ್ಣ ಬೆಳವಣಿಗೆ ಹಾಗೂ ಸಾಧನೆಗೆ ಆರೋಗ್ಯ ಮತ್ತು ಪೌಷ್ಠಿಕತೆಯು ಅವಶ್ಯಕ. ಆದುದರಿಂದ ಪೌಷ್ಠಿಕತೆಯ ಬಗ್ಗೆ ಅರಿವನ್ನು ಮೂಡಿಸುವಂತ್ತಾಗಬೇಕು ಎಂದು ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಅಪೌಷ್ಠಿಕತೆಗೆ ಬಾಲ್ಯ ವಿವಾಹವೂ ಒಂದು ಕಾರಣ. ಇದನ್ನು ನಿಷೇಧಿಸುವುದರಿಂದ ಅಪೌಷ್ಠಿಕತೆಯನ್ನು ತಡೆ ಹಿಡಿಯಬಹುದು ಎಂದರು.
ಈ ಸಂದರ್ಭದಲ್ಲಿ ಗರ್ಭಿಣಿ ತಾಯಂದಿರಿಗೆ ಫಲಪುಷ್ಪಗಳನ್ನಿತ್ತು ಅಭಿನಂದಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರೀಶ್,ನಾಗರಕಟ್ಟೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ರಜನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕರಾದ ಕಾತ್ಯಾಯಿನಿ, ಭಾರತಿ, ಶುಭಾ, ರತಿ ಈ ಸಂದರ್ಭದಲ್ಲಿದ್ದರು.