Call Us Now: 08272 221717

ಮೂಡುವೇಣುಪುರದಲ್ಲಿ ಕೊಳಲ ಕೃಷ್ಣನಿಗೆ ಸರಳ ಮೊಸರುಕುಡಿಕೆ

September 11, 2020

ಮೂಡುಬಿದಿರೆ: ಯಕ್ಷಗಾನೀಯ ಹಿಮ್ಮೇಳ ಸಹಿತ ವೇಷಧಾರಿ ಶ್ರೀಕೃಷ್ಣನೇ ಬೀದಿಗಳಲ್ಲಿ ಅಡ್ಡಲಾಗಿ ತೂಗು ಹಾಕಿರುವ ಮೊಸರ ಕುಡಿಕೆಗಳನ್ನು ಒಡೆಯುವ ವಿಶಿಷ್ಠ ಶತಮಾನದ ಇತಿಹಾಸ ಹೊಂದಿರುವ ಉತ್ಸವವು ಕೊರೊನಾ ಆತಂಕದ ನಡುವೆಯೂ ಸರಳವಾಗಿ ಶುಕ್ರವಾರ ನಡೆಯಿತು.

ಶುಕ್ರವಾರ ಮಧ್ಯಾಹ್ನ ಪೇಟೆಯ ಕಲ್ಸಂಕ ಬಳಿಯಿರುವ ಗೋಪಾಲ ಕೃಷ್ಣ ದೇವಳದಲ್ಲಿ ಮಹಾಪೂಜೆಯ ಬಳಿಕ ಶ್ರೀಕೃಷ್ಣ ವೇಷಧಾರಿ ದೇವಳದ ಆವರಣದಲ್ಲಿ ಕಟ್ಟಿದ ಮೊಸರಕುಡಿಕೆಯನ್ನು ಒಡೆಯುವ ಮೂಲಕ ಸಂಪ್ರದಾಯಿಕ ಮೊಸರುಕುಡಿಕೆಗೆ ಚಾಲನೆ ನೀಡಲಾಯಿತು. ಯಶೋಧೆ-ಕೃಷ್ಣ ಮೂರ್ತಿಯೊಂದಿಗೆ ಯಕ್ಷಗಾನೀಯ ವೇಷಧಾರಿಯು ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಸಾಗಿ, ಅಲ್ಲಿ ಕಟ್ಟಿದ ಮೊಸರುಕುಡಿಕೆ ಒಡೆದರು. ಶ್ರೀ ಕೃಷ್ಣ ಕಟ್ಟೆಯ ಬಳಿ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ಅಳವಡಿಸಲಾದ 35 ಮೊಸರುಕುಡಿಕೆಗಳನ್ನು ಶ್ರೀ ಕೃಷ್ಣವೇಷಧಾರಿ ಚಂದ್ರಶೇಖರ ಕುಲಾಲ್ ಯಕ್ಷಗಾನೀಯ ಶೈಲಿಯಲ್ಲಿ ಕುಣಿಯುತ್ತಾ ತನ್ನ ಕೈಯಲ್ಲಿದ್ದ ಚಕ್ರಾಯುಧದಿಂದ ಒಂದೊಂದೇ ಮಡಿಕೆಗಳನ್ನು ಒಡೆದರು.
ಕೃಷ್ಣವೇಷಧಾರಿಗೆ ಸನ್ಮಾನ:
ಕೃಷ್ಣವೇಷಧಾರಿ ಚಂದ್ರಶೇಖರ ಕುಲಾಲ್ ಅವರನ್ನು ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ಗೌರವಿಸಲಾಯಿತು. ಹಿಮ್ಮೇಳ ಕಲಾವಿದರನ್ನು ಗೌರವಿಸಲಾಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್‍ನ ಗೌರವಾಧ್ಯಕ್ಷರಾದ ಶ್ರೀಪತಿ ಭಟ್, ಪ್ರಮಥ್‍ಕುಮಾರ್, ಅಧ್ಯಕ್ಷ ಗಣೇಶ್‍ರಾವ್, ಸಂಚಾಲಕ ಸಂತೋಷ್‍ಕುಮಾರ್, ಕ್ಷೇತ್ರದ ಆಡಳಿಯ ಮೊಕ್ತೇಸರ ಗುರುಪ್ರಸಾದ್ ಉಪಸ್ಥಿತರಿದ್ದರು.
ಪುರಮೆರವಣಿಗೆಯ ಬಳಿಕ ದೇವಳದ ಸರೋವರದಲ್ಲಿ ಮೃಣ್ಯಯ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಯಿತು.