Call Us Now: 08272 221717

ಉರ್ಪೆಲ್‍ಪಾದೆ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಮಾಸಾಚರಣೆ

September 24, 2020

ಮೂಡುಬಿದಿರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇದರ ವತಿಯಿಂದ ಪೋಷಣಾ ಅಭಿಯಾನ ಮಾಸಾಚರಣೆಯ ಕಾರ್ಯಕ್ರಮವು ಮಂಗಳವಾರ ಮೂಡುಬಿದಿರೆ ಸಮೀಪದ ಉರ್ಪೆಲ್‍ಪಾದೆ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಬಾಲವಿಕಾಸ ಸಮಿಯಿತಿಯ ಗೌರವಾಧ್ಯಕ್ಷ, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪೌಷ್ಠಿಕಾಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವಂತರಾಗಲು ಸಾಧ್ಯವಿದೆ. ಅದಕ್ಕಾಗಿ ಪೌಷ್ಠಿಕಾಂಶ ತುಂಬಿರುವ ಆಹಾರ ಪದಾರ್ಥಗಳ ಗಿಡಗಳನ್ನು ನೆಡಬೇಕು ಎಂದು ತಿಳಿಸಿದ ಅವರು ಸ್ವತ: ತಾವೇ ಸೋನ್ಸ್ ಫಾರ್ಮ್‍ನಿಂದ ಗಿಡಗಳನ್ನು ತರಿಸಿ ಕೇಂದ್ರದ ಆವರಣದಲ್ಲಿ ನೆಡಿಸಿದರು.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ದಿನಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ಸಮತೋಲನ ಆಹಾರ ಸೇವನೆ ಅಗತ್ಯ. ಶಿಶು ಮರಣ, ಗರ್ಭಿಣಿಯರ ಮರಣ ಪ್ರಮಾಣವನ್ನು ತಡೆಗಟ್ಟುವಲ್ಲಿ ನಾವು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಉರ್ಪೆಲ್‍ಪಾದೆ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶಾಂಭವಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್‍ಪೇಟೆ ಅವರು ಕೌಶಲ್ಯಾಭಿವೃದ್ಧಿ ತರಬೇತಿಯ ಬಗ್ಗೆ, ಆಹಾರೋತ್ಪನ್ನ ಚಟುವಟಿಕೆಗಳನ್ನು ಯುವಕ, ಯುವತಿ, ಮಹಿಳಾ ಮಂಡಲದವರು ಪಡೆಯುವ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮೂರು ಮಂದಿ ಗರ್ಭಿಣಿ ಸ್ತ್ರೀಯರಿಗೆ ಫಲ ಪುಷ್ಪವನ್ನು ನೀಡಿ ಗೌರವಿಸಲಾಯಿತು.
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜಿಲ್ಲಾ ಪ್ರತಿನಿಧಿ ಸಾಂತಪ್ಪ, ಶಾಲಾ ಮುಖ್ಯ ಶಿಕ್ಷಕಿ ಸುಮಾ, ನೆಹರು ಯುವ ಕೇಂದ್ರದ ಪ್ರತಿನಿಧಿ ಸದ್ಗುಣ್, ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಸಹಾಯಕಿಯರಾದ ಗಿರಿಜಾ, ಜೋಯ್ಸ್, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಶಾಲಾ ವ್ಯವಸ್ಥಾಪಕರು, ಬಾಲವಿಕಾಸ ಸಮಿತಿಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ತಾಯಂದಿರು ಸ್ತ್ರೀಶಕ್ತಿಯ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ಮೂಡುಬಿದಿರೆ ವಲಯದ ಮೇಲ್ವೀಚಾರಕಿ ಭಾರತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಚಿತ್ರ : 22 ಮೂಡ್ ಪೋಷಣಾ ಅಭಿಯಾನ