Call Us Now: 08272 221717

ಮೈಕ್ರೋ ಫೈನಾನ್ಸ್ ಗಳಿಂದ ಮಹಿಳೆಯರಿಗೆ ಮಾನಸಿಕ ಹಿಂಸೆ: ಋಣಮುಕ್ತ ಹೋರಾಟ ಸಮಿತಿ ಆರೋಪ

June 27,2020

ಮೂಡುಬಿದಿರೆ: ಕೊರೊನಾ ಸಮಸ್ಯೆಯಿದ್ದರೂ ಮೈಕ್ರೋ ಫೈನಾನ್ಸ್ಗಳು ಗ್ರಾಹಕರ ಮೂರು ತಿಂಗಳ ಬಡ್ಡಿ ಮನ್ನಾ ಮಾಡಿಲ್ಲ. ಬದಲಾಗಿ ಸಾಲಗಾರರ ಮನೆಗೆ ಬಂದು ಹಣ ಕಟ್ಟುವಂತೆ ಮಹಿಳೆಯರಿಗೆ ಒತ್ತಡ ಹೇರಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ, ವಕೀಲ ಬಿ.ಎಂ. ಭಟ್ ಹೇಳಿದರು.

ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಕೊರೊನಾ ಸಂತ್ರಸ್ಥರಿಗೆ ಆರು ತಿಂಗಳವರೆಗೆ ಮಾಸಿಕ ರೂ. 7,5೦೦ ಪರಿಹಾರ ಧನ ಮತ್ತು ದಿನವಹಿ ವಸ್ತುಗಳನ್ನು ಒದಗಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಾರದು ಎಂದು ಆಗ್ರಹಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ.೫೦ ರಷ್ಟು ಹಾಸಿಗೆಗಳನ್ನು ಸರ್ಕಾರ ವಶಕ್ಕೆ ಪಡೆದುಕೊಂಡು ರೋಗಿಗಳಿಗೆ ಕೋವಿಡ್ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಈಗಿನ ನಿಯಮದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ಕೊಟ್ಟಿರುವುದು ರೋಗಿಗಳಿಗೆ ಹೊರೆಯಾಗಲಿದೆ ಎಂದರು.
ತಹಸೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಅಧ್ಯಕ್ಷೆ ವಿನೋದಾ, ಪ್ರಮುಖರಾದ ಜ್ಯೋತಿ, ಗೀತಾ, ಲತಾ, ಲೋಕೇಶ್, ರಾಮಚಂದ್ರ, ಅಶೀರ್ಪ, ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.