Call Us Now: 08272 221717

ಬೆಟ್ಟದಲ್ಲಿ ಪಾಠ ಮಾಡಿದ ಪಣಪಿಲ ಶಿಕ್ಷಕಿಯರಿಗೆ ರೋಟರಿ ಟೆಂಪಲ್ ಟೌನ್ ಗೌರವ

September 11, 2020

ಮೂಡುಬಿದಿರೆ : ಆನ್‍ಲೈನ್ ಪದ್ಧತಿಯಿಂದ ಪರಿಪೂರ್ಣ ಶಿಕ್ಷಣ ಪಡೆಯಲು ಅಸಾಧ್ಯ. ಆನ್‍ಲೈನ್ ಶಿಕ್ಷಣ, ಪಠ್ಯಕಡಿತದಂತಹ ಕ್ರಮಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುವುದಲ್ಲದೆ ಶಿಕ್ಷಣ ವ್ಯವಸ್ಥೆಗೆ ಮಾರಕವಾದೀತು ಎಂದು ನಿವೃತ್ತ ಪ್ರಾಂಶುಪಾಲ, ಹಿರಿಯ ಸಾಹಿತಿ ಡಾ. ಜಯಪ್ರಕಾಶ್ ಮಾವಿನಕುಳಿ ಹೇಳಿದರು.ಮೂಡುಬಿದಿರೆ ರೋಟರಿ ಟೆಂಪಲ್‍ಟೌನ್ ವತಿಯಿಂದ ಟೆಂಪಲ್‍ಟೌನ್ ಪಾರ್ಕ್ ಸಭಾಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರೋಟರಿ ಜಿಲ್ಲಾ ಉಪರಾಜ್ಯಪಾಲ ಡಾ. ಯತಿಕುಮಾರಸ್ವಾಮಿ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಝೋನಲ್ ಲೆಫ್ಟಿನೆಂಟ್ ಬಲರಾಮ್ ಕೆ.ಎಸ್ ಉಪಸ್ಥಿತರಿದ್ದರು.
ನಾಗರಿಕ ಪ್ರಪಂಚದಿಂದ ದೂರವಿರುವ ಪಣಪಿಲ ಗ್ರಾಮದ ಒಂಟಿಕಜೆ ಬೆಟ್ಟದಲ್ಲಿರುವ ಮಲೆಕುಡಿಯ ಕಾಲನಿಗೆ 10 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯರಾದ ಪಣಪಿಲ ಸರ್ಕಾರಿ ಹಿ.ಪ್ರಾಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಜೈನ್, ಶಿಕ್ಷಕಿಯರಾದ ನವ್ಯ ಟಿ.ಎಸ್, ರಶ್ಮಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ರೋಟರಿ ಟೆಂಪಲ್‍ಟೌನ್‍ನ ಸದಸ್ಯರಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯುವರಾಜ ಜೈನ್, ವಿನ್ಸೆಂಟ್ ಡಿಕೋಸ್ತ, ಮಂಜುನಾಥ, ಹರೀಶ್ ಕಾಪಿಕಾಡ್, ಗುರುರಾಜ್, ಧೀರೆಂದ್ರ ಜೈನ್, ಶಹನ್‍ರಾಜ್ ಅವರನ್ನು ಗೌರವಿಸಲಾಯಿತು.
ರೊಟರಿ ಕ್ಲಬ್ ಟೆಂಪಲ್‍ಟೌನ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ವಂದಿಸಿದರು.