Call Us Now: 08272 221717

ಗೋಕಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಗೃಹ ಸಚಿವರಿಂದ ಸೂಚನೆ: ಉಮಾನಾಥ ಕೋಟ್ಯಾನ್

October 15, 2020

ಮೂಡುಬಿದಿರೆ: ಜಿಲ್ಲೆಯಲ್ಲಿ ಗೋ ಕಳ್ಳತನ ಮತ್ತು ಅಕ್ರಮ ಗೋಸಾಗಾಟ ಪ್ರಕರಣ ಹೆಚ್ಚುತ್ತಿದ್ದು ಇದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇಯಲು ಬಿಟ್ಟ, ಕೊಟ್ಟಿಗೆಯಲ್ಲಿದ್ದ ದನಗಳನ್ನು ಬಲತ್ಕಾರವಾಗಿ ಕಳ್ಳತನ ಮಾಡಲಾಗುತ್ತಿದೆ. ಈ ಕೃತ್ಯವನ್ನು ವಿರೋಧಿಸಿದವರಿಗೆ ಮಾರಕಾಯುಧ ತೋರಿಸಿ ಬೆದರಿಸಲಾಗುತ್ತಿದೆ. ಮೂಡುಬಿದಿರೆಯ ಗಂಟಾಲ್‍ಕಟ್ಟೆ, ಶಿರ್ತಾಡಿ ತೋಡಾರು ಪರಿಸರದಲ್ಲಿ ಗೋಕಳ್ಳತನ ಹೆಚ್ಚುತ್ತಿದೆ. ಇತ್ತೀಚೆಗೆ ಪಡುಕೊಣಾಜೆಯಲ್ಲಿ ಗೋಕಳ್ಳರ ವಾಹನವನ್ನು ತಡೆಯಲೆತ್ನಿಸಿದ್ದ ಪೊಲೀಸರ ಮೇಲೆ ಗೋಕಳ್ಳರು ತಲವಾರು ಝಳಪಿಸಿ ಬೆದರಿಕೆಯೊಡ್ಡಿದ್ದರು. ಕೊನೆಗೆ ಪೊಲೀಸ್ ಇನ್‍ಸ್ಪೆಕ್ಟರ್ ರಿವಾಲ್ವರ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದಾಗ ಆರೋಪಿಗಳು ಪರಾರಿಯಾಗಿದ್ದರು. ಇಲ್ಲಿ ಪೊಲೀಸರ ಕಾರ್ಯನಿರ್ವಹಣೆಯನ್ನು ನಾನು ಅಭಿನಂದಿಸುತ್ತೇನೆ ಎಂದರು. ಗೋಕಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗೃಹಸಚಿವರು ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆಂದು ಶಾಸಕರು ತಿಳಿಸಿದರು.
ಕಾಂಗ್ರೆಸ್ ನಾಯಕರು ನಾಲಾಯಕರು:ಹಾಥರಸ್‍ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರವೆಸಗಿ ಕೊಲೆ ನಡೆಸಿದ್ದು ಅಮಾನವೀಯ ಕೃತ್ಯವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಸ್ಪಕ್ಷಪಾತ ತನಿಖೆ ನಡೆಸುತ್ತಿದ್ದರೂ ಕಾಂಗ್ರೆಸ್ ನಾಯಕರು ಇದನ್ನು ರಾಜಕೀಯಕ್ಕೆ ಬಳಸಿಕೊಂಡು ಯೋಗಿಯನ್ನು ಟೀಕಿಸುವ ರೀತಿ ನೋಡಿದರೆ ಇವರನ್ನು ನಾಯಕರೆನ್ನುವ ಬದಲು ನಾಲಾಯಕರೆಂದರೆ ಸೂಕ್ತ ಎಂದು ಉಮಾನಾಥ ಕೋಟ್ಯಾನ್ ಟೀಕಿಸಿದರು. ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ, ಬಿಜೆಪಿ ಪ್ರಮುಖರಾದ ಬಾಹುಬಲಿ ಪ್ರಸಾದ್, ಅಜಯ್ ರೈ, ಸುಖೇಶ್ ಶೆಟ್ಟಿ, ಕೇಶವ, ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ ಉಪಸ್ಥಿತರಿದ್ದರು.