Call Us Now: 08272 221717

ಕೊರೊನಾ ಹೆಸರಿನಲ್ಲಿ ದ.ಕ ಜಿಲ್ಲೆ ಜನರ, ಮುಂಬೈ ಕನ್ನಡಿಗರ ಬದುಕಲ್ಲಿ ಚೆಲ್ಲಾಟ ಬೇಡ: ಅಭಯಚಂದ್ರ ಜೈನ್

July 23, 2020

ಮೂಡುಬಿದಿರೆ: ಬುಧವಾರದಿಂದ ರಾಜ್ಯದಲ್ಲಿ ಯಾವುದೇ ಲಾಕ್‌ಡೌನ್ ಇರುವುದಿಲ್ಲ ಎಂದು ಸಿಎಂ ನೀಡಿರುವ ಹೇಳಿಕೆಯ ಬಳಿಕವೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಲಾಕ್‌ಡೌನ್ ನಡೆದಿದ್ದು ಜನತೆಯಲ್ಲಿ ಜಿಲ್ಲಾಡಳಿತ ಅನಗತ್ಯ ಗೊಂದಲ ಮೂಡಿಸಬಾರದಿತ್ತು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಹೇಳಿಕೆಯನ್ನೂ ಮೀರಿ ಗೊಂದಲ ಮೂಡಿಸಿರುವ ಆಡಳಿತ ವೈಖರಿ ಸರಿಯಾದ ಕ್ರಮವಲ್ಲ ಎಂದರು.

ಕೊರೋನಾ ಸಂಕಟದಿಂದಾಗಿ ಆರ್ಥಿಕ ಸ್ಥಿತಿ ಹದೆಗೆಟ್ಟಿದೆ. ಕೊರೋನಾವನ್ನು ಧೈರ್ಯದಿಂದ ಎದುರಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸೂಕ್ತ ಮುನ್ನೆಚ್ಚರಿಕೆಯ ಕಾನೂನು ಪಾಲನೆಗಳ ಜತೆಗೆ ದೈನಂದಿನ ವ್ಯವಹಾರ, ಶಿಕ್ಷಣ ಎಲ್ಲವೂ ನಡೆಯಬೇಕು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಗುಂಪು ಚಟುವಟಿಕೆಗಳಿಲ್ಲದ ಚಟುವಟಿಕೆಗಳು ನಡೆಯುವಂತಾಗಬೇಕು ಎಂದ ಅಭಯಚಂದ್ರ ಬಿಸಿ ನೀರು ಸೇವನೆ ಸೇರಿದಂತೆ ನಮ್ಮಲ್ಲೇ ಕಂಡು ಕೊಂಡ ಮನೆ ಮದ್ದುಗಳ ಮೂಲಕವೂ ಕೊರೋನಾ ತಡೆ ಸಾಧ್ಯವಿದೆ. ಒಟ್ಟಿನಲ್ಲಿ ಕೊರೋನಾ ಭಯ ಬಿಟ್ಟು ಬದುಕುವ ವಾತಾವರಣ ನಿರ್ಮಾಣವಾಗಬೇಕಿದೆ. ಎಂದರು.

ಮುಂಬೈ ಕನ್ನಡಿಗರಿಗೆ ತವರಲ್ಲಿ ಆದ ತೊಂದರೆ ಮರುಕಳಿಸಬಾರದು. ತೀರಿಕೊಂಡವರಿಗೂ ಗೌರವದ ಅಂತ್ಯ ಸಂಸ್ಕಾರ ಸಿಗುವಂತಾಗಬೇಕು. ಆದರೆ ಈ ಬಗ್ಗೆ ಕೊರೋನಾ ಸಂಕಟದ ಐದು ತಿಂಗಳ ಬಳಿಕವೂ ಗೊಂದಲ ಉಳಿದಿದಿದೆ. ಗೊಂದಲವಿಲ್ಲದ ಬದುಕು, ಆರ್ಥಿಕತೆ ಚೇತರಿಸಿಕೊಂಡು ಬೆಳೆಯುವತ್ತ ನಾವೀಗ ಗಮನ ಹರಿಸಬೇಕಾಗಿದೆ ಎಂದವರು ಹೇಳಿದರು.