Call Us Now: 08272 221717

ಕೃಷಿ ಬೆಲೆ ಆಯೋಗದ ವತಿಯಿಂದ ದರೆಗುಡ್ಡೆ ಯಲ್ಲಿ  ತೋಟಗಾರಿಕಾ ಮಾಹಿತಿ, ಸಸಿಗಳ ವಿತರಣೆ

June 19, 2020

ಮೂಡುಬಿದಿರೆ: ಕರ್ನಾಟಕ ಕೃಷಿ ಬೆಲೆ ಆಯೋಗದಿಂದ ದತ್ತು ಸ್ವೀಕರಿಸಲಾದ ದರೆಗುಡ್ಡೆ ಗ್ರಾಮದ ರೈತರಿಗೆ `ರೈತರ ಆದಾಯ ಹಾಗೂ ಕಲ್ಯಾಣ ವೃದ್ಧಿ ‘ ಯೋಜನೆಯಡಿ ಬೀದರ್‍ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ. ಆಶ್ರಿತ ಮಂಗಳೂರಿನ ಭಾ. ಕೃ. ಅ.ಪ. -ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ `ತೋಟಗಾರಿಕಾ ಬೆಳೆಗಳ ಸುಧಾರಿತ ಕೃಷಿ ಪದ್ಧತಿ’ ಕುರಿತು ಮಾಹಿತಿ, ಫಲಬಿಡುವ ಸಸಿಗಳ ವಿತರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ದರೆಗುಡ್ಡೆಯ ಒಟ್ಟು 100 ಮಂದಿ ರೈತರಿಗೆ ಫಲಬಿಡುವ ಸಸಿಗಳನ್ನು ವಿತರಿಸುವ ಯೋಜನೆ ಇದಾಗಿದ್ದು ಪ್ರಥಮ ಹಂತದಲ್ಲಿ 25 ಮಂದಿ ರೈತರಿಗೆ ತಲಾ 2 ತೆಂಗು, 5 ಮಾವು 5 ಚಿಕ್ಕು ಹಾಗೂ ಒಂದು ಜಾಮ್ ಹೀಗೆ 13 ಸಸಿಗಳನ್ನು ವಿತರಿಸಲಾಯಿತು.

` ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ವಿಭಾಗ ಮುಖ್ಯಸ್ಥ ಡಾ| ಟಿ.ಜೆ. ರಮೇಶ ಅವರು ನೆರೆದ ರೈತರನ್ನುದ್ದೇಶಿಸಿ ಮಾತನಾಡಿ, ರೈತರು ನೆಮ್ಮದಿಯ ಜೀವನ ನಡೆಸಲು ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು, ನಿರಂತರವಾಗಿ ಆದಾಯ ತರುವ ಬೆಳೆಗಳನ್ನು ಬೆಳೆಸಬೇಕು’ ಎಂದರು.

ಕೆ.ವಿ.ಕೆ.ದ ಸಸ್ಯ ಸಂರಕ್ಷಣ ವಿಜ್ಞಾನಿ ಡಾ| ಕೇದಾರನಾಥ್ ಅವರು ಸಸ್ಯ ಸಂರಕ್ಷಣೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಹಾಗೂ ಕೀಟಗಳನ್ನು ಹತೋಟಿಗೆ ತರುವ ಬಗೆಯನ್ನು ವಿವರಿಸಿದರು. ಕೇಂದ್ರದ ಮಣ್ಣು ವಿಜ್ಞಾನಿ ಡಾ. ಮಲ್ಲಿಕಾರ್ಜುನ ಅವರು ಮಣ್ಣು ಪರೀಕ್ಷಾ ವಿಧಾನ ಹೇಗೆ, ರೈತರು ಮಣ್ಣು ಪರೀಕ್ಷೆಗೆಂದು ಒಯ್ಯುವ ಮಣ್ಣನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಸಹಾಯಕ ತೋಟಗಾರಿಕಾ ಅ„ಕಾರಿ ಯುಗೇಂದ್ರ ಅವರು ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.

ಮೂಡುಬಿದಿರೆ ಕೃಷಿ ವಿಚಾರವಿನಿಮಯ ಕೇಂದ್ರದ ಸಹಭಾಗಿತ್ವದಲ್ಲಿ ಕೇಂದ್ರ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಅವರ ಕೃಷಿ ಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಮತ್ತಿತರರು ಪಾಲ್ಗೊಂಡಿದ್ದರು.