Call Us Now: 08272 221717

ಜುಲೈ 8ರಿಂದ ಸ್ವಯಂ ಪ್ರೇರಿತವಾಗಿ ಅರ್ಧ ದಿನ ‘ಬೆದ್ರ ಬಂದ್’ ನಿರ್ಧಾರ

July 7, 2020

ಮೂಡುಬಿದಿರೆ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 8ರಿಂದ ಜುಲೈ 20ರವರೆಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಅರ್ಧ ದಿನ ಸ್ವಯಂಪ್ರೇರಿತರಾಗಿ ಲಾಕ್ ಡೌನ್ ಹೇರಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.

ಸ್ವರ್ಣ ಮಂದಿರದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಉದ್ದಿಮೆದಾರರ, ವ್ಯಾಪಾರಿಗಳ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ಜನರ ಆರೋಗ್ಯದ ದೃಷ್ಟಿಯಿಂದ ಇಂದಿನಿಂದ ಹತ್ತು ದಿನಗಳವರೆಗೆ ಪುರಸಭಾ ವ್ಯಾಪ್ತಿಯೊಳಗೆ ಎಲ್ಲಾ ಅಂಗಡಿ ಮುಗ್ಗಂಟುಗಳನ್ನು ಮಧ್ಯಾಹ್ನ 2 ಗಂಟೆಯಿಂದ ಬಂದ್ ಮಾಡಲಾಗುವುದು. ಈ ಅವಧಿಯಲ್ಲಿ ಖಾಸಗಿ ಬಸ್ ಸೇರಿದಂತೆ, ರಿಕ್ಷಾ, ಕಾರು ಇತರ ವಾಹನಗಳ ಸಂಚಾರವನ್ನು ಕೂಡ ನಿರ್ಬಂಧಿಸಲಾಗಿದೆ. ಬಾರ್, ವೈನ್‌ಶಾಪ್‌ಗಳು ಕೂಡ ಅರ್ದ ದಿನ ಮಾತ್ರ ತೆರೆದಿರುತ್ತವೆ ಎಂದರು.
ಕೂಲಿ ಕಾರ್ಮಿಕರಿಗೆ, ಸರಕಾರಿ ನೌಕರರಿಗೆ, ಹಾಗೂ ಕೆಲಸಕ್ಕೆ ಹೋಗುವವರಿಗೆ ಸ್ವಯಂಪ್ರೇರಿತ ಲಾಕ್‌ಡೌನಿಂದ ವಿನಾಯಿತಿ ನೀಡಲಾಗುವುದು. ಮಧ್ಯಾಹ್ನ 2 ಗಂಟೆಯ ನಂತರ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ದಂಡ ಹೇರುವ ಬದಲು ಕೇಸು ದಾಖಲಿಸುವಂತೆ ಶಾಸಕರು ಪೊಲೀಸ್ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್‌ಗೆ ಸೂಚನೆ ನೀಡಿದರು. ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ. ಈಗಾಗಲೇ ನಿಗದಿಯಾದ ಸಭೆ ಸಮಾರಂಭಗಳು ಸರಕಾರದ ಮಾರ್ಗಸೂಚಿಯಂತೆ ನಡೆಯಲಿದೆ. ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕರಿಸಬೇಕು ಎಂದು ಶಾಸಕರು ವಿನಂತಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಸ್ವಯಂಪ್ರೇರಿತ ಲಾಕ್ ಡೌನ್ ಸ್ವಾಗತಾರ್ಹ, ಆದರೆ ಕೂಲಿಕಾರ್ಮಿಕರಿಗೆ ಮತ್ತು ನಿತ್ಯ ಕೆಲಸಕ್ಕೆ ಹೋಗುವವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆಯಿತ್ತರು.
ತಹಶಿಲ್ದಾರ್ ಅನಿತಾಲಕ್ಷ್ಮೀ, ಪುರಸಭೆ ಮುಖ್ಯಾಧಿಕಾರಿ ಇಂದು, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಕಾರ್ಮಿಕ ಮುಖಂಡ ಯಾದವ ಶೆಟ್ಟಿ, ಜೆಡಿಎಸ್ ಮುಖಂಡ ತೋಡಾರು ದಿವಾಕರ ಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.