Call Us Now: 08272 221717

ಕೊರೊನಾ ಅಪಪ್ರಚಾರ: ವಾಲ್ಪಾಡಿ ಗ್ರಾ.ಪಂ ಉಪಾಧ್ಯಕ್ಷ, ಸದಸ್ಯರ ವಿರುದ್ಧ ಪ್ರಕರಣ ದಾಖಲು

June 27, 2020

ಮೂಡುಬಿದಿರೆ : ಕ್ವಾರಂಟೈನ್ ಕೇಂದ್ರವಾಗಿ ನಿಯೋಜನೆಗೊಂಡ ವಸತಿ ಶಾಲೆಯೊಂದರ ವಿಚಾರದಲ್ಲಿ ಅಪಪ್ರಚಾರ ನಡೆಸಿರುವ ವಾಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಸಹಿತ ಸದಸ್ಯರ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ವಾಲ್ಪಾಡಿ ಗ್ರಾಮದಲ್ಲಿರುವ ಭುವನಜ್ಯೋತಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಈ ನಿಗಾ ಕೇಂದ್ರದಲ್ಲಿ ಓರ್ವ ಮಹಿಳೆ ಸೇರಿದಂತೆ 12 ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಈ ಪೈಕಿ ಓರ್ವ ವ್ಯಕ್ತಿಯಲ್ಲಿ ಸೋಕು ದೃಢಪಟ್ಟಿದ್ದು ಆರೋಪಿಗಳು ಇಬ್ಬರು ವ್ಯಕ್ತಿಗಳಿಗೆ ಕೊರೋನಾ ಸೋಕು ತಗುಲಿದೆ ಎಂದು ಅಪಪ್ರಚಾರ ನಡೆಸಿ ಶಾಲೆಯ ವಿರುದ್ಧ ಇಲ್ಲಸಲ್ಲದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ ರಿಕ್ಷಾವೊಂದಕ್ಕೆ ಮೈಕ್ ಕಟ್ಟಿ ಬಹಿರಂಗ ಪ್ರಚಾರ ನಡೆಸುವ ಮೂಲಕ ಗ್ರಾಮಸ್ಥರಿಗೆ ಭೀತಿಯನ್ನು ಉಂಟು ಮಾಡಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಂಡ ಸಂಹಿತೆಯ ಪ್ರಕಾರ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಉಪಾಧ್ಯಕ್ಷ ಅರುಣ್ ಕುಮಾರ್ ಸಹಿತ ಇತರ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮುಂದೆ ಇವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಾಗುವ ಸಾಧ್ಯತೆಗಳು ಇವೆ ಎಂದು ಸ್ಥಳೀಯರು ತಿಳಿಸಿದ್ದಾರೆ